About Simpi Linganna
ಜಾನಪದ ರತ್ನ ಸಿಂಪಿ ಲಿಂಗಣ್ಣನವರು 1905ರ ಫೆಬ್ರವರಿ 10ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ ಸೀರೆ ನೇಯ್ದು ಮಾರುವ ಕೆಲಸ ಕೈಗೊಂಡರೆ, ಲಿಂಗಣ್ಣ ಬಿಡುವಿನ ವೇಳೆಯಲ್ಲಿ ಉಪ್ಪು ಮಾರಿ ಸ್ವತಃ ಅಡುಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಂತರ ಅಣ್ಣ ಈರಣ್ಣ, ‘ಗುರಮ್ಮ’ ಎಂಬಾಕೆಯನ್ನು ಮದುವೆಯಾದಾಗ ಲಿಂಗಣ್ಣನವರಿಗೆ ಅಡುಗೆ ತಾಪತ್ರಯದಿಂದ ವಿಮುಕ್ತಿ ದೊರೆಯಿತು. ಈ ಅತ್ತಿಗೆ ‘ಗುರಮ್ಮ’ ಹೇಳುತ್ತಿದ್ದ ಗರತಿ ಹಾಡುಗಳು ಲಿಂಗಣ್ಣನವರಿಗೆ ಜನಪದ ಸಾಹಿತ್ಯದ ಹುಚ್ಚು ಹಿಡಿಸಿತು.